ಬುಧವಾರ, ಏಪ್ರಿಲ್ 12, 2017

ಅಂಗೈ ಮೇಲಿನ ಹುಣ್ಣನ್ನು ನೋಡಲೊಪ್ಪದ ದೇಶ


 ಅನುಶಿವಸುಂದರ್
africa ಗೆ ಚಿತ್ರದ ಫಲಿತಾಂಶ

ಆಫ್ರಿಕನ್ನರ ಮೇಲೆ ನಡೆಯುತ್ತಿರುವ ದಾಳಿಗಳು ಸಾರ್ವಜನಿಕ ಹಿಂಸಾಚಾರಗಳು ಇನ್ನೂ ಹೆಚ್ಚಬಹುದೆನ್ನುವುದಕ್ಕೆ ಮುನ್ಸೂಚನೆಯಾಗಿದೆ

ನಾವು ಕಣ್ಣೆದುರಿಗಿರುವ ಸತ್ಯವನ್ನು ನಿರಾಕರಿಸುವ ರಾಷ್ಟ್ರವಾಗುತ್ತಿದ್ದೇವೆ. ನಮ್ಮ ದೇಶ ಎಷ್ಟೇ ವೈವಿಧ್ಯತೆಗಳಿಂದ ಕೂಡಿದ್ದರೂ ಒಳಗೊಳಗಿಂದ ನಾವು ಒಂದು ಜಾತಿವಾದಿ, ಜನಾಂಗೀಯವಾದಿ, ಮಹಿಳಾ ದ್ವೇಷಿ ಸಮಾಜವಾಗಿದ್ದೇವೆ ಎಂಬುದನ್ನು ನಾವು ಒಪ್ಪಿಕೊಳ್ಳಲು ತಯಾರಿಲ್ಲ. ಭಾರತೀಯತೆ ಎಂಬುದು ಒಂದೆಡೆ ಹಿಂದೂ ಎಂಬ ಗುರುತಿನೊಂದಿಗೆ ಸೇರಿಹೋಗತೊಡಗಿದ್ದರೆ ಮತ್ತೊಂದೆಡೆ ತಮಗಿಂತ ಭಿನ್ನವಾಗಿ ಕಾಣುವ, ವರ್ತಿಸುವ ಮತ್ತು ಚಿಂತಿಸುವ ಎಲ್ಲರನ್ನೂ ತನ್ನ ವ್ಯಾಖ್ಯಾನದಿಂದ ಹೊರದೂಡುತ್ತಿದೆ. ಭಾರತದ ಕುರೂಪವನ್ನು ಬಯಲಿಗೆಳೆಯುವ ಘಟನೆಗಳು ನಡೆದಾಗಲೆಲ್ಲಾ ನಾವು ನಮ್ಮ ಸಮಾಜವು ತುಂಬಾ ಸಹನಶೀಲವೆಂದೂಅಹಿಂಸಾಪರವೆಂದೂ ಆದ್ದರಿಂದಲೇ ಗಾಂದಿ ಮತ್ತು ಬುದ್ಧನಂಥವರು ಹುಟ್ಟಲು ಸಾಧ್ಯವಾಗಿದೆಯೆಂದೂ ವಾದಿಸಲು ತೊಡಗುತ್ತೇವೆ. ಆದರೆ ವಾದವನ್ನು ಈಗ ಯಾರೂ ಒಪ್ಪಲು ಸಿದ್ಧರಿಲ್ಲ. ಅದರಲ್ಲೂ ಭಾರತೀಯರಿಂದ ನಾಗರಿಕ ಸಮಾಜಕ್ಕೆ ಕಳಂಕ ತರುವ ರೀತಿ ಅತ್ಯಂತ ಅಮಾನುಷ ಅತ್ಯಂತ ಅನಾಗರಿಕ ದಾಳಿಗಳಿಗೆ ತುತ್ತಾಗುತ್ತಿರುವ ಆಫ್ರಿಕನ್ನರಂತೂ ಕಿಂಚಿತ್ತೂ ನಂಬಲು ತಯಾರಿಲ್ಲ.

ಇತ್ತೀಚೆಗೆ ನೊಯಿಡಾದಲ್ಲಿ ನಡೆದದ್ದರಲ್ಲಿ ಹೊಸದೇನೂ ಇಲ್ಲ. ಅದು ಕಳೆದ ಕೆಲವು ವರ್ಷಗಳಲ್ಲಿ ಭಾರತದ ಇನ್ನಿತರ ಹಲವಾರು ನಗರಗಳಲ್ಲಿ ನಡೆದದ್ದರ ಪ್ರತಿಬಿಂಬವಾಗಿತ್ತಷ್ಟೆ. ಬಾರಿ ಮಾದಕ ವಸ್ತುಗಳನ್ನು ಅತಿಯಾಗಿ ಸೇವಿಸಿ ಸಾವಿಗೀಡಾದ ಭಾರತೀಯ ವಿದ್ಯಾರ್ಥಿಯ ಮರಣದ ಕಾರಣವನ್ನು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ನೈಜೀರಿಯನ್ನರ ಮೇಲೆ ಹೊರಿಸಲಾಯಿತು. ಐವರನ್ನು ಬಂಧಿಸಲಾಯಿತು. ವಿಷಯ ಅಲ್ಲಿಗೇ ನಿಲ್ಲಲಿಲ್ಲ. ನಂತರದ ದಿನಗಳಲ್ಲಿ ಓದು ಮತ್ತು ಉದ್ಯೋಗವನ್ನು ಅರಸುತ್ತಾ ಬಂದು ಇಲ್ಲಿಯೇ ವಾಸಿಸುತ್ತಿರುವ ಕಂಡಕಂq ಆಫ್ರಿಕನ್ನರ ಮೇಲೆಲ್ಲಾ ದಾಳಿಗಳು ಪ್ರಾರಂಭವಾದವು. ಇದರ ಮುಂದುವರೆಕೆಯಾಗಿಯೇ ಮಾಲ್ ಒಂದರಲ್ಲಿ ೬೦೦ಕ್ಕೂ ಹೆಚ್ಚು ಜನರ ಗುಂಪೊಂದು ಅಲ್ಲಿಗೆ ಬಂದಿದ್ದ ಅಮಾಯಕ ಆಫ್ರಿಕನ್ನರ ಮೇಲೆ ದಾಳಿ ನಡೆಸಿ ಹೊಡೆದು ಬಡಿದು ಹಲವರನ್ನು ಗಾಯಗೊಳಿಸಿತು.

ಭಾರತೀಯ ಪೊಲೀಸ್ ಆಧಿಕಾರಿಗಳು ಘಟನೆಯ ಬಗ್ಗೆ ತೋರಿದ ನಿರ್ಲಕ್ಷದಿಂದ ಪ್ರಚೋದಿತರಾಗಿ ಆಫ್ರಿಕಾ ಖಂಡಕ್ಕೆ ಸೇರಿದ ೪೩ ದೇಶಗಳ ವಿದೇಶಿ ಕಾರ್ಯಾಲಯಗಳು ಒಂದು ಬಲವಾದ ಹೇಳಿಕೆಯನ್ನು ನೀಡಿವೆ. ಅವರು ಆಫ್ರಿಕನ್ನರ ಬಗ್ಗೆ ವ್ಯಕ್ತವಾಗಿರುವ ಮಡುಗಟ್ಟಿದ ಆಕ್ರೋಶವನ್ನು ಅನ್ಯದ್ವೇಷದ ಮತ್ತು ಜನಾಂಗೀಯ ಸ್ವರೂಪದ ದಾಳಿಯೆಂದು ಬಣ್ಣಿಸಿವೆ ಮತ್ತು ಕಡುನಿಂದನೆಗೆ ಅರ್ಹವಾದ ಘಟನೆಂiನ್ನು  ಭಾರತೀಯ ಆಡಳಿತ ವರ್ಗ ಖಂಡಿಸಬೇಕಾದಷ್ಟು ಖಂಡಿಸಿಲ್ಲವೆಂದೂ ಹೇಳಿದೆ. ಇದೊಂದು ಗಂಭೀರವಾದ ಆರೋಪವಾಗಿದ್ದು ಇಂಥಾ ಘಟನೆಗಳನ್ನು ಭಾರತ ಕೇವಲ ದುರದೃಷ್ಟಕರ ಅಥವಾ ದಂಡನಾರ್ಹ ಅಪರಾಧ ಎಂದಷ್ಟೆ ಹೇಳಿ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ಹಾಗೆಯೇ ದೇಶದ ಹಲವಾರು ಕಡೆ  ಆಫ್ರಿಕನ್ನರ ಜೊತೆ ಭಾರತೀಯರು ಕೆಟ್ಟದಾಗಿ ನಡೆದುಕೊಳ್ಳುತ್ತಿರುವ ಹಿಂದೆ ಜನಾಂಗೀಯ ಮನೋಭಾವ ಇಲ್ಲವೆಂದೂ ಸಹ ವಾದಿಸಲು ಸಾಧ್ಯವಿಲ್ಲ.

ಈಶಾನ್ಯಭಾರತದ ಜನರೊಂದಿಗೆ ಭಾರತೀಯರು ನಡೆದುಕೊಂಡಿದ್ದ ರೀತಿಯಲ್ಲೂ ಇದೇ ಧೋರಣೆ ಇತ್ತು. ಮೂದಲಿಸುವುದು, ಗೇಲಿ ಮಾಡುವುದು, ಅಪಹಾಸ್ಯ ಮಾಡುವುದು, ವಸತಿ ನಿರಾಕರಿಸುವುದು, ಬಹುಸಂಖ್ಯಾತರಿಗಿಂತ ಭಿನ್ನವಾಗಿದ್ದಾರೆಂಬ ಏಕೈಕ ಕಾರಣಕ್ಕೆ ಅವರ ಮೇಲೆ ದಾಳಿ ನಡೆಸುವುದು..ಇವೇ ಇನ್ನಿತ್ಯಾದಿ ಕಿರುಕುಳಗಳನ್ನು ಅನುಭವಿಸುತ್ತಲೇ ಈಶಾನ್ಯ ಭಾರತೀಯರು ಇಲ್ಲಿ ಜೀವನ ನಡೆಸಬೇಕಾಗಿದೆ. ಆಫ್ರಿಕನ್ನರ ಸಮಸ್ಯೆ ಇನ್ನೂ ಸಂಕೀರ್ಣವಾದುದು ಮತ್ತು ಗಂಭೀರವಾದದು. ಅವರು ಸಾಮಾನ್ಯ ಭಾರತೀಂiರಿಗಿಂತ ಎದ್ದು ಕಾಣುವಂತೆ ಭಿನ್ನವಾಗಿರುವುದು ಒಂದೆಡೆಯಾದರೆ ಭಾರತೀಂii ಪುರಾಣ ಮತ್ತು ಜನಪ್ರಿಯ ಸಂಸ್ಕೃತಿಗಳಲ್ಲಿ ಅವರ ಬಣ್ಣದ ಬಗ್ಗೆ ಆಳವಾಗಿ ಕೂತಿರುವ ಪೂರ್ವಗ್ರಹಗಳ ವಿರುದ್ಧವೂ ಸಂಘರ್ಶ ಮಾಡಬೇಕಿದೆ. ದಿನನಿತ್ಯದ ಮೌಖಿಕ ಮತ್ತು ದೈಹಿಕ ಕಿರುಕುಳಗಳಿಂದ  ತಪ್ಪಿಸಿಕೊಳ್ಳಲು ಬೇರೆಬೇರೆ ದೇಶಗಳಿಗೆ ಸೇರಿದ ನೂರಾರು ಆಫ್ರಿಕನ್ನರೂ ಸಹ ಈಶಾನ್ಯ ಭಾರತೀಯರಂತೆ ಒಂದೇ ಕೇರಿಯಲ್ಲಿ ವಾಸಮಾಡಬೇಕಾದ ಕೇರೀಕರಣದ (ಗೆಟ್ಟೋಐಸೇಷನ್) ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈಶಾನ್ಯ ಭಾರತೀಯರಂತೆ ಆಫ್ರಿಕನ್ನರೂ ಸಹ ಸರಾಸರಿ ಭಾರತೀಯನ ಅಜ್ನಾನವನ್ನೂ ಸಹಿಸಿಕೊಳ್ಳಬೇಕಿದೆ. ಏಕೆಂದರೆ ಒಬ್ಬ ಸಾಮಾನ್ಯ ಭಾರತೀಯನ ಪಾಲಿಗೆ ಆಫ್ರಿಕಾ ಎಂಬುದು ಒಂದು ದೇಶವೇ ಹೊರತು ೫೪ ವಿವಿಧ ದೇಶಗಳನ್ನುಳ್ಳ, ವಿವಿಧ ಸಂಸ್ಕೃತಿಗಳನ್ನುಳ್ಳ, ಮತ್ತು ಮಹತ್ತರವಾದ ವಸಾಹತುಶಾಹಿ ವಿರೋಧಿ ಹೋರಾಟಗಳ ಪರಂಪರೆಯುಳ್ಳ ಒಂದು ಖಂಡವೆಂಬ ತಿಳವಳಿಕೆಯಿಲ್ಲ.

ಈಶಾನ್ಯ ಭಾರತೀಯರ ಮೇಲೆ ನಡೆಯುತ್ತಿದ್ದ ಹಿಂಸಾತ್ಮಕ ದಾಳಿಗಳ ಸಂದರ್ಭದಲ್ಲಿ, ಲಾರೆನ್ಸ್ ಲಿಯಾಂಗ್ ಮತ್ತು ಗೋಲಾಕ್ ನೌಲಾಕ್ ರು ೨೦೧೪ರಲ್ಲಿ ಬರೆದ ಲೇಖನವೊಂದರಲ್ಲಿ ಮುಖಪುಟ ಜನಾಂಗೀಯವಾದ (ಫ್ರಂಟ್ ಪೇಜ್ ರೇಸಿಸಂ) ಮತ್ತು ಅಡಿ ಟಿಪ್ಪಣಿ ಜನಾಂಗೀಯವಾದ (ಫುಟ್ನೋಟ್ ರೇಸಿಸಂ) ಎಂಬ ಪದಗಳನ್ನು ಹುಟ್ಟುಹಾಕಿದ್ದರು. ಮೊದಲನೆಯದು ಮುಖಪುಟದಲ್ಲಿ ವರದಿಯಾಗಿಬಿಡುವ, ಇತ್ತೀಚೆಗೆ ನೋಯಿಡಾದಲ್ಲಿ ನಡೆದಂಥ ಹಿಂಸಾತ್ಮಕ ಘಟನೆಗಳನ್ನು ಸೂಚಿಸುತ್ತದೆ. ಆದರೆ ಅದಕ್ಕಿಂತ ಹಲವು ಪಟ್ಟು ಕುತಂತ್ರಗಳಿಂದ ಕೂಡಿದ್ದು ಅಡಿಟಿಪ್ಪಣಿ ಜನಾಂಗೀಯವಾದ ಎಂದು ಅವರು ವಿವರಿಸುತ್ತಾರೆ. ದೈನಂದಿನ ಜೀವನದಲ್ಲಿ ಸರ್ವೇಸಾಮಾನ್ಯ ರೂಪದಲ್ಲಿ ವ್ಯಕ್ತವಾಗುವುದು ಬಗೆಯ ಜನಾಂಗೀಯವಾದವೇ; ಜನರು ನಿಮ್ಮನ್ನು ನೋಡುವ ರೀತಿಯಲ್ಲಿ, ನಿಮ್ಮೊಡನೆ ವ್ಯವಹಾರವನ್ನು ತಪ್ಪಿಸಿಕೊಳ್ಳುವ ಬಗೆಗಳಲ್ಲಿ, ನಿಮ್ಮ ಬಗ್ಗೆ ಆಡಿಕೊಳ್ಳುವ ಮಾತುಗಳಲ್ಲಿ, ಒಂದೇ ಪಡಿಯಚ್ಚಿನಂತೆ ಎಲ್ಲರನ್ನೂ ಒಂದೇ ರೀತಿ ತಾಳೆಹಾಕಿ ಮೂಲಭೂತ ನಾಗರಿಕ ಮರ್ಯಾದೆ ಮತ್ತು ನಾಗರೀಕ ಸೇವೆಗಳನ್ನು ನಿರಾಕರಿಸುವ ರೀತಿಗಳಲ್ಲಿ ಅವು ವ್ಯಕ್ತವಾಗುತ್ತವೆ. ಈಶಾನ್ಯ ಭಾರತೀಯರು ಮತ್ತು ಭಾರತದಲ್ಲಿರುವ ಆಫ್ರಿಕನ್ನರು ವಾಸ್ತವಗಳ ವಿರುದ್ಧ ದಿನನಿತ್ಯ ಸಂಘರ್ಶಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಇದು ಅವರ ನಿತ್ಯಜೀವನವನ್ನು ಅತ್ಯಂತ ಅಸಹನೀಯಗೊಳಿಸುತ್ತಿದೆ. ಇದಲ್ಲದೆ ಇದೇ ಪತ್ರಿಕೆಯಲ್ಲಿ ತಮ್ಗನ್ಲಾಲ್ ಗೈಹ್ತೆ ಅವರು ಬರೆದಂತೆ ಸಾಂಸ್ಥಿಕ ಜನಾಂಗೀಯವಾದ (ಇನ್ಸ್ಟಿಟ್ಯೂಷನಲ್ ರೇಸಿಸಂ) ವೂ ಇದೆ.( (http://www.epw.in/jour- nal/2014/11/commentary/nido-taniam-and-fraught-question- racism-india.html).  ಇದು ಪೊಲೀಸ್ ಮತ್ತಿತರ ಪ್ರಭುತ್ವದ ಅಂಗಸಂಸ್ಥೆಗಳು ಮೂಲಭೂತ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುವುದನ್ನು ನಿರಾಕರಿಸುವುದನ್ನು ಒಳಗೊಳ್ಳುತ್ತದೆ

ನಮ್ಮ ಸರ್ಕಾರಗಳು ಪರಿಗಣಿಸುವ ಏಕೈಕ ಜನಾಂಗೀಯವಾದವೆಂದರೆ ಹೊರದೇಶಗಳಲ್ಲಿ ನಡೆಯುವ ಜನಾಂಗೀಯವಾದಗಳನ್ನು ಮಾತ್ರ. ಹೀಗಾಗಿ ಭಾರತೀಯ ಮೂಲದ ಒಬ್ಬ ವ್ಯಕ್ತಿಯು ಅಮೆರಿಕ ಅಥವಾ ಆಸ್ಟ್ರೇಲಿಯಾಗಳಲ್ಲಿ ದಾಳಿಗೊಳಗಾದರೆ ನಮ್ಮ ಸರ್ಕಾರವು ಕೂಡಲೇ ಅಂಥದ್ದನ್ನು ಜನಾಂಗೀಯ ದಾಳಿ ಎಂದು ಖಂಡಿಸಿಬಿಡುತ್ತದೆ. ಆದರೆ ಅಂಥದ್ದೇ ಘಟನೆ ಭಾರತದಲ್ಲಿ ನಡೆದರೆ ಅದು ಕೇವಲ ದಂಡನಾರ್ಹ ಅಪರಾಧ ವಷ್ಟೇ ಆಗುತ್ತದೆ

ಮೂರು ಬಗೆಯ ಜನಾಂಗೀಯವಾದಗಳ ಜೊತೆಜೊತೆಗೆ, ಎಲ್ಲಾ ಬಗೆಯ ಕಾನೂನು ಬಾಹಿರ ಗುಂಪುದಾಳಿ ಮತ್ತು ಹಿಂಸಾಚಾರಗಳನ್ನು ಪ್ರಭುತ್ವವು ನೇರವಾಗಿ ಸಮರ್ಥಿಸಿಕೊಳ್ಳುತ್ತಿರುವ ವಾತಾವರಣವು ದೇಶದಲ್ಲಿ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಇಂಥಾ ಘಟನೆಗಳು ಇನ್ನಷ್ಟು ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ. ಗೋವನ್ನು ಕದ್ದು ಮಾರಾಟ ಮಾಡುತ್ತಿದ್ದನೆಂಬ ಅನುಮಾನ ಮಾತ್ರದಿಂದ ಹಾಡು ಹಗಲಿನಲ್ಲೇ ಗುಂಫೊಂದು ಒಬ್ಬ ವ್ಯಕ್ತಿಯನ್ನು ಏಪ್ರಿಲ್ ರಂದು ಆಳ್ವಾರ್ನಲ್ಲಿ ಹೊಡೆದು-ಬಡಿದು ಕೊಲ್ಲಬಹುದಾದರೆ, ಒಬ್ಬ ಆಫ್ರಿಕನ್, ಒಬ್ಬ ಈಶಾನ್ಯ ಭಾರತೀಯ, ಒಬ್ಬ ದಲಿತ, ಒಬ್ಬ ಮುಸ್ಲಿಮ ಅಥವಾ ಭಿನ್ನ ಚಿಂತನೆಯುಳ್ಳ ಯಾವುದೇ ಒಬ್ಬವ್ಯಕ್ತಿ ಇಲ್ಲಿ ಸುರಕ್ಷಿತನೆಂದು ಭಾವಿಸಿಕೊಳ್ಳಲು ಹೇಗೆ ಸಾಧ್ಯ?

ತಾವು ಸ್ವಭಾವ ಸಹಜವಾಗಿಯೇ ಜನಾಂಗೀಯವಾದಿಗಳಲ್ಲವೆಂದುಕೊಳ್ಳುತ್ತಾ ಭಾರತೀಯರು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇತಿಹಾಸವು ಬೇರೆಯದ್ದೇ ಕಥೆಯನ್ನು ಹೇಳುತ್ತದೆ. ಆಫ್ರಿಕಾ ದೇಶದ ಹಲವಾರು ವಸಾಹತುಶಾಹಿ ವಿರೋಧಿ ಹೋರಾಟಗಳು ನಮ್ಮೀರ್ವರ ನಡುವೆ ಸಹಜ ಸೌಹಾರ್ದತೆಯನ್ನು ಏರ್ಪಡಿಸಬೇಕಿತ್ತು. ಆದರೆ ಅದು ಸಂಭವಿಸಲಿಲ್ಲ. ಆಫ್ರಿಕಾದಲ್ಲಿರುವ ಮತ್ತು ಇತರ ಭಾಗಗಗಳಲ್ಲಿ ನೆಲೆಯೂರಿರುವ ಭಾರತೀಯರು ಇತರ ವರ್ಣೀಯರ ಹೋರಾಟಗಳ ಜೊತೆ ಬೆರೆತದ್ದು ಬಹಳ ಅಪರೂಪಅವರ ಭಾರತೀಯತೆ ಪರಿಕಲ್ಪಯು ನಮ್ಮನ್ನು ಕಪ್ಪು ವರ್ಣೀಯರಿಗಿಂತ ಬಿಳಿಯರಿಗೆ ಸಮೀಪ ಮಾಡುವ  ಇಂಡೋ-ಆರ್ಯನ್ ರಕ್ತದ ಪ್ರಾಚೀನತೆಯೊಂದಿಗೆ ತಳುಕುಹಾಕಿಕೊಂಡಿದೆ. ವಾಸ್ತವವಾಗಿ ಪ್ರಾಚೀನ ಕಾಲದಿಂದಲೂ ಭಾರತದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಗೆ ಕಾರಣವಾದ ವರ್ಣ ವ್ಯವಸ್ಥೆಯ ಪದಶಃ ಅರ್ಥ ಬಣ್ಣ ಎಂಬುದೇ ಆಗಿದೆ. ಅಂತಿಮವಾಗಿ ಭಾರತವು ಭವಿಷ್ಯದಲ್ಲಿ ನಿಜಕ್ಕೂ ಒಂದು ವೈವಿಧ್ಯತೆಯುಳ್ಳ, ಸಹನಶೀಲ, ಮತ್ತು ಒಳಗೊಳ್ಳುವ ಸಮಾಜವಾಗಬೇಕೆಂದರೆ ಮನೋಭಾವ ಬದಲಾಗಲೇ ಬೇಕು. ಆದರೆ ವಿದ್ಯಮಾನಗಳು ಅತ್ಯಂತ ಹಿಂಸಾತ್ಮಕವಾಗಿ ಅದರ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿದೆ ಎಂಬುದು ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿದೆ. ಯಾವುದೇ ಜಾತಿ, ಮತ , ಪಂಥಗಳಿಗೆ ಸೇರಿದ್ದರೂ  ಭಾರತದ ಭವಿಷ್ಯದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರಲ್ಲೂ ವಿದ್ಯಮಾನಗಳು ಕಳವಳವನ್ನುಂಟುಮಾಡಬೇಕಿದೆ.


      ಕೃಪೆ:Economic and Political Weekly
           April 8, 2017. Vol.52. No. 14                                                                                     
                                                                                                                                


.



ಕಾಮೆಂಟ್‌ಗಳಿಲ್ಲ: